ಚಿಕ್ಕಬಳ್ಳಾಪುರ -
ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ; ಇದೇ ಹೆಸರಿನ ತಾಲ್ಲೂಕಿನ ಹಾಗೂ ಉಪವಿಭಾಗದ ಆಡಳಿತ ಕೇಂದ್ರ. ಕೋಲಾರಕ್ಕೆ 58 ಕಿ.ಮೀ. ದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿದೆ. ಇದರ ವಿಸ್ತೀರ್ಣ 11.65 ಚ.ಕಿ.ಮೀ. ಜನಸಂಖ್ಯೆ 54,938 (2001). ಇದಕ್ಕೊಂದು ಪೌರಸಭೆ ಇದೆ; ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಸೌಲಭ್ಯವಿದೆ. ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಮಾಧ್ಯಮಿಕ ಪ್ರೌಢಶಾಲೆಗಳು, ಕಾಲೇಜು ಇವೆ. ಈ ಪಟ್ಟಣ ರೇಷ್ಮೆ ಉದ್ಯಮಕ್ಕೆ ಕಲ್ಲುಸಕ್ಕರೆ ತಯಾರಿಕೆಗೆ ಪ್ರಸಿದ್ಧ. ಸಣ್ಣ ಕೈಗಾರಿಕೆಗಳ ಬೆಳವಣಿಗೆಗಾಗಿ ಇಲ್ಲಿ ಕೈಗಾರಿಕಾ ಕ್ಷೇತ್ರವೊಂದು ಸ್ಥಾಪಿತವಾಗಿದೆ. ಇದೊಂದು ವ್ಯಾಪಾರ ಕೇಂದ್ರ. ಪಟ್ಟಣದ ಬಹುತೇಕ ದೇವಾಲಯಗಳು ಈಚಿನವು. ಚನ್ನಕೇಶವ ದೇವಾಲಯ ಅತ್ಯಂತ ಹಳೆಯದು. ಪಟ್ಟಣಕ್ಕೆ 4 ಕಿ.ಮೀ. ದೂರದಲ್ಲಿ ಚಿತ್ರಾವತಿ ಎಂಬ ಕೊಳವಿದೆ. ಇದೊಂದು ತೀರ್ಥ. ಇದರ ಸುತ್ತಲ ಹಂತಗಳನ್ನು ದಿವಾನ್ ಪೂರ್ಣಯ್ಯನವರು ಕಟ್ಟಿಸಿದರೆಂದು ಹೇಳಲಾಗಿದೆ. ಈ ಕೊಳಕ್ಕೆ ಹಲಸಮ್ಮನ ಬಾವಿ ಎಂದೂ ಹೆಸರುಂಟು. ಹಲಸಮ್ಮ ಪಾಳೆಯಗಾರನೊಬ್ಬನ ಕುಮಾರಿ. ಇದರ ಹತ್ತಿರ ಮಲ್ಲಿಕಾರ್ಜುನ ಚೆನ್ನಪ್ಪನ ಗದುಗೆಯಿದೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೂ, ಜಿಲ್ಲೆಯ ಪ್ರಮುಖ ಸ್ಥಳಗಳಿಗೂ ರಸ್ತೆಗಳುಂಟು. ಬೆಂಗಳೂರು, ಚಿಂತಾಮಣಿ, ಕೋಲಾರಗಳಿಗೆ ರೈಲ್ವೆ ಸಂಪರ್ಕವಿದೆ. 					 (ಆರ್.ಎಂ.ಆರ್.)

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಚಿಕ್ಕಬಳ್ಳಾಪುರ ಪಟ್ಟಣವಲ್ಲದೆ ಮಂಡಿಕಲ್, ನಂದಿ ಮತ್ತು ಚಿಕ್ಕಬಳ್ಳಾಪುರ ಎಂಬ ಮೂರು ಹೋಬಳಿಗಳೂ 210 ಗ್ರಾಮಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ 592.8 ಚ.ಕಿ.ಮೀ. (228.9 ಚ.ಮೈ.) ಜನಸಂಖ್ಯೆ 1,84,226 (2001). ಪೂರ್ವದಲ್ಲಿ ಶಿಡ್ಲಘಟ್ಟ, ಪಶ್ಚಿಮದಲ್ಲಿ ಗೌರಿಬಿದನೂರು, ಉತ್ತರದಲ್ಲಿ ಗುಡಿಬಂಡೆ ತಾಲ್ಲೂಕುಗಳೂ ದಕ್ಷಿಣದಲ್ಲಿ ಬೆಂಗಳೂರು ಜಿಲ್ಲೆಯೂ ಇದರ ಮೇರೆಗಳು. ತಾಲ್ಲೂಕಿನ ವಾರ್ಷಿಕ ಪ್ರಸಾಮಾನ್ಯ ಮಳೆ 771.2 ಮಿ.ಮೀ. ಕೆಂಪು ಮತ್ತು ಎರೆಮಣ್ಣಿನಿಂದ ಕೂಡಿದ ಈ ಪ್ರದೇಶದಲ್ಲಿ ರಾಗಿ, ಬತ್ತ, ಕಬ್ಬು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಪಂಪುಗಳ ಮೂಲಕ ದೊಡ್ಡ ಬಾವಿಗಳಿಂದ ನೀರನ್ನೆತ್ತಿ ವ್ಯವಸಾಯ ಮಾಡುವುದು ಸಾಮಾನ್ಯ. ಆಲೂಗೆಡ್ಡೆ, ಈರುಳ್ಳಿ, ಉಪ್ಪುನೇರಿಳೆ, ಮೆಣಸಿನಕಾಯಿ, ತರಕಾರಿ ಮತ್ತು ಹಣ್ಣುಗಳನ್ನೂ ಬೆಳೆಯುತ್ತಾರೆ. ಮಾವು, ಹುಣಸೆ, ಹೊಂಗೆ ಮತ್ತು ಸರ್ವೆ ತೋಪುಗಳುಂಟು, ವ್ಯವಸಾಯದ ಜೊತೆಗೆ ಪಶುಪಾಲನೆ ಮತ್ತು ಕುರಿಸಾಕುವುದೂ ಜನರ ಉದ್ಯೋಗಗಳು.

ಸುಪ್ರಸಿದ್ಧ ವಿಶ್ರಾಂತಿಧಾಮ ನಂದಿದುರ್ಗ (4,851) ಈ ತಾಲ್ಲೂಕಿನಲ್ಲಿದೆ. ಚನ್ನರಾಯನಬೆಟ್ಟ (4,762), ಸ್ಕಾಂದಗಿರಿ (4,749), ಬ್ರಹ್ಮಗಿರಿ (4,657) ಮತ್ತು ಹರಿಹರೇಶ್ವರ ಬೆಟ್ಟ (4,122) ಇವು ಈ ಶ್ರೇಣಿಗೆ ಸೇರಿದ ಬೆಟ್ಟಗಳು. ನಂದಿಯ ಈಶಾನ್ಯಕ್ಕಿರುವ ಗುಂಡಲಗುರ್ಕಿ ಬೆಟ್ಟದಲ್ಲಿ ಪಾಪಘ್ನಿ ನದಿ ಹುಟ್ಟಿ ಬಾಗೇಪಲ್ಲಿ ಮುಖಾಂತರ ಮದನಪಲ್ಲಿಯತ್ತ ಹರಿಯುತ್ತದೆ. ಈ ನದಿಗೆ ದೇವನಹಳ್ಳಿಯ ಹತ್ತಿರ ಅಡ್ಡಗಟ್ಟೆಹಾಕಿ ವೆಂಕಟೇಶ ಸಾಗರವನ್ನು ನಿರ್ಮಿಸಿದ್ದಾರೆ. ಪಾಪಘ್ನಿ ನದಿ ಕಮಲಾಪುರದ ಹತ್ತಿರ ಉತ್ತರ ಪಿನಾಕಿನಿಯನ್ನು ಸೇರುತ್ತದೆ. ಉತ್ತರ ಪಿನಾಕಿನಿ ನದಿಯ ನೀರನ್ನು ಈ ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 21 ಸಹಕಾರ ಕೈಗಾರಿಕಾ ಸಂಘಗಳುಂಟು (1967). 129 ಪ್ರಾಥಮಿಕ ಶಾಲೆಗಳು (1967), ಪ್ರೌಢಶಾಲೆಗಳು ಮತ್ತು ಕಾಲೇಜೂ ಖಾಸಗಿ ವಾಣಿಜ್ಯ ವಿದ್ಯಾಶಾಲೆಗಳೂ ಇವೆ. ಆಸ್ಪತ್ರೆ ಮಕ್ಕಳ ಕಲ್ಯಾಣ ಕೇಂದ್ರ, ಪಶುವೈದ್ಯ ಶಾಲೆಗಳು, ಮತ್ಸ್ಯೋದ್ಯಮ ಸಂಘ ಮುಂತಾದವು ಈ ತಾಲ್ಲೂಕಿನ ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತಿವೆ. ನಂದಿ ಬೆಟ್ಟದ ಮೇಲಿರುವ ಕಬ್ಬನ್ ಹೌಸ್ ಪ್ರವಾಸಿಗರಿಗೆ ಒಂದು ಆಕರ್ಷಣೆ. ಈ ತಾಲ್ಲೂಕಿನಲ್ಲಿ ನಡೆಯುವ ಜಾತ್ರೆಗಳಲ್ಲಿ ನಂದಿಯ ಭೋಗನಂದೀಶ್ವರಸ್ವಾಮಿ ಜಾತ್ರೆ, ಚಿತ್ರಾವತಿಯ ಸುಬ್ರಹ್ಮಣ್ಯಸ್ವಾಮಿ ಜಾತ್ರೆ ಪ್ರಸಿದ್ಧವಾದವು. ಜಾತ್ರೆ ದಿನಗಳಲ್ಲಿ ದನಗಳ ವ್ಯಾಪಾರವೂ ನಡೆಯುತ್ತದೆ.

ಆವತಿ ಪ್ರಭು ಮಲ್ಲಭೈರೇಗೌಡ ತನ್ನ ಮಗ ಮರಿಗೌಡನೊಡನೆ ಬೇಟೆಗೆ ಹೋಗಿದ್ದಾಗ ಕೋಡಿಮಂಚನಹಳ್ಳಿ ಸಮೀಪದ ಕಾಡಿನಲ್ಲಿ ಒಂದು ಮೊಲ ಬೇಟೆ ನಾಯಿಗಳಿಗೆ ಹೆದರದೆ ಎದುರಾಗಿ ನಿಂತದ್ದನ್ನು ಕಂಡನಂತೆ. ಅಲ್ಲಿಯ ಗಂಡು ಭೂಮಿಯ ಪ್ರಭಾವವೇ ಇದಕ್ಕೆ ಕಾರಣವೆಂದು ಅವನು ಭಾವಿಸಿ ವಿಜಯನಗರದ ಅರಸನ ಅಪ್ಪಣೆ ಪಡೆದು ಅಲ್ಲೊಂದು ಕೋಟೆ ಕಟ್ಟಿ ಸ್ಥಾಪಿಸಿದನೆಂದು ಹೇಳಲಾಗಿದೆ. ಅದೇ ಬೆಳೆದು ಚಿಕ್ಕಬಳ್ಳಾಪುರವಾಯಿತು. ಅವನ ವಂಶದವರು ಬಹಳ ಕಾಲ ಈ ಸುತ್ತಣ ಪ್ರದೇಶವನ್ನಾಳಿದರು. ಬೈಚೇಗೌಡನ ಆಳ್ವಿಕೆಯ ಕಾಲದಲ್ಲಿ ಒಮ್ಮೆ ಮೈಸೂರು ಸೇನೆ ಇಲ್ಲಿಯ ಕೋಟೆ ಮುತ್ತಿತು. ಮರಾಠರ ಮಧ್ಯ ಪ್ರವೇಶದಿಂದ ಮುತ್ತಿಗೆಯನ್ನು ಕೈಬಿಡಲಾಯಿತು. ಚಿಕ್ಕಬಳ್ಳಾಪುರದ ಪ್ರಭುಗಳು ತಮ್ಮ ಪ್ರಾಂತ್ಯವನ್ನು ವಿಸ್ತರಿಸುತ್ತಿದ್ದು. ಬೈಚೇಗೌಡನ ಅನಂತರ ಬಂದ ದೊಡ್ಡಬೈರೇಗೌಡ ಮೈಸೂರಿಗೆ ಬಿಟ್ಟುಕೊಟ್ಟಿದ್ದ ಪ್ರದೇಶಗಳನ್ನೆಲ್ಲ ಮತ್ತೆ ವಶಪಡಿಸಿಕೊಂಡ. 1762ರಲ್ಲಿ ಚಿಕ್ಕಪ್ಪನಾಯಕನ ಆಳ್ವಿಕೆಯ ಕಾಲದಲ್ಲಿ ಹೈದರ್ ಚಿಕ್ಕಬಳ್ಳಾಪುರಕ್ಕೆ ಮೂರು ತಿಂಗಳುಗಳ ಕಾಲ ಮುತ್ತಿಗೆ ಹಾಕಿದ. ಚಿಕ್ಕಪ್ಪನಾಯಕ ಹೈದರಿನಿಗೆ 5,00,000 ಪಗೋಡಗಳನ್ನು ಕೊಡಲು ಒಪ್ಪಿದುದರಿಂದ ಹೈದರ್ ತನ್ನ ಮುತ್ತಿಗೆಯನ್ನು ಹಿಂದಕ್ಕೆ ತೆಗೆದುಕೊಂಡ. ಹೈದರನ ಸೇನೆ ನಿರ್ಗಮಿಸಿದ ಮೇಲೆ ನಾಯಕ ಗುತ್ತಿಯ ಮುರಾರಿರಾಯನ ಸಹಾಯದಿಂದ ತನ್ನ ಹಿಂದಿನ ಬಲವನ್ನು ಪಡೆಯಲು ಪ್ರಯತ್ನಿಸಿದ. ಅವನ ಸೇನೆಯ ವಶಕ್ಕೆ ದುರ್ಗವನ್ನೊಪ್ಪಿಸಿ ನಾಯಕನೂ ಅವನ ಸಂಸಾರದವರೂ ನಂದಿದುರ್ಗದಲ್ಲಿ ಅಡಗಿಕೊಂಡರು. ಹೈದರ್ ಒಡನೆಯೇ ತನ್ನ ಸೇನೆಯೊಡನೆ ಹಿಂದಿರುಗಿ ಚಿಕ್ಕಬಳ್ಳಾಪುರವನ್ನೂ ಇತರ ಮುಖ್ಯ ಸ್ಥಳಗಳನ್ನೂ ವಶಪಡಿಸಿಕೊಂಡು ನಾಯಕನನ್ನೂ ಅವನ ಕುಟುಂಬದವರನ್ನು ಸೆರೆಯಲ್ಲಿಟ್ಟ. ನಾಯಕ ಬಂಧನದಲ್ಲೇ ತೀರಿಕೊಂಡ.

	ಈ ಪಾಳೆಯಗಾರವಂಶದಲ್ಲೊಬ್ಬನಾಗಿದ್ದ ನಾರಾಯಣಗೌಡನಿಗೆ ಲಾರ್ಡ್ ಕಾರ್ನ್‍ವಾಲೀಸ್ ಚಿಕ್ಕಬಳ್ಳಾಪುರವನ್ನು ವಹಿಸಿಕೊಟ್ಟ. ಈ ಸಮಾಚಾರ ಟಿಪ್ಪುವಿಗೆ ತಿಳಿದಾಗ ಅವನು ಹಠಾತ್ತನೆ ಅದನ್ನು ವಶಪಡಿಸಿಕೊಂಡ. 1791ರಲ್ಲಿ ಬ್ರಿಟಿಷರು ನಂದಿದುರ್ಗವನ್ನು ವಶಪಡಿಸಿಕೊಂಡಾಗ ಸ್ವಲ್ಪಕಾಲ ನಾರಾಯಣಗೌಡನಿಗೆ ಈ ಪ್ರದೇಶದ ಆಡಳಿತವನ್ನು ವಹಿಸಿದ್ದರು. ಬ್ರಿಟಿಷರಿಗೂ ಟಿಪ್ಪುವಿಗೂ ಶಾಂತಿ ಕೌಲು ಆದಾಗ ಅವನು ಮತ್ತೆ ಅಧಿಕಾರ ಕಳೆದುಕೊಂಡ. ಬ್ರಿಟಿಷರು ಅಂತಿಮವಾಗಿ ಟಿಪ್ಪುವನ್ನು ಸೋಲಿಸಿ ಕೊಂದು ಮೈಸೂರು ರಾಜ್ಯವನ್ನು ಜಯಿಸಿದಾಗ ಚಿಕ್ಕಬಳ್ಳಾಪುರವೂ ನೆರೆಯ ಪ್ರದೇಶಗಳಂತೆ ಮೈಸೂರಿನ ಒಡೆಯರ ಆಡಳಿತಕ್ಕೆ ಸೇರಿತು. ಈಗ ಇದು ಕರ್ನಾಟಕದ ಭಾಗವಾಗಿದೆ. 							*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ